ಗ್ರೇವಿಲ್, ಚಾಲ್ರ್ಸ್ ಕ್ಯಾವೆಂಡಿಷ್ ಫಲ್ಕ್

 	
1794 - 1865. ದಿನಚರಿ ಸಾಹಿತ್ಯದಲ್ಲಿ ಪ್ರಸಿದ್ಧನಾದ ಇಂಗ್ಲಿಷ್ ಲೇಖಕ. ಈಟನ್ ಮತ್ತು ಆಕ್ಸ್‍ಫರ್ಡ್‍ಗಳಲ್ಲಿ ವ್ಯಾಸಂಗ ಮಾಡಿದ, ಲಾರ್ಡ್ ಬೇಥಸ್ರ್ಟ್‍ನ ಆಪ್ತ ಕಾರ್ಯದರ್ಶಿಯ ಕೆಲಸ ಸಿಕ್ಕಿದ್ದರಿಂದ ಪದವೀಧರನಾಗುವ ಮುನ್ನವೇ ವ್ಯಾಸಂಗಕ್ಕೆ ಶರಣು ಹೊಡೆದ. ಅನಂತರ ಜಮೈಕದ ಕಾರ್ಯದರ್ಶಿಯ ಕಚೇರಿಯಲ್ಲಿ ಕೆಲ ಕಾಲ ಕೆಲಸ ಮಾಡಿದ. 1821ರಲ್ಲಿ ಪ್ರಿವಿ ಕೌನ್ಸಿಲ್ ಕಾರ್ಯಾಲಯದಲ್ಲಿ ಗುಮಾಸ್ತನಾಗಿ 40 ವರ್ಷ ಸೇವೆ ಸಲ್ಲಿಸಿದ. ಈ ಅವಧಿಯಲ್ಲಿ ಈತನಿಗೆ ನಾಲ್ಕನೆಯ ಜಾರ್ಜ್, ನಾಲ್ಕನೆಯ ವಿಲಿಯಂ, ಮತ್ತು ವಿಕ್ಟೋರಿಯ ರಾಣಿ ಈ ಮೂವರ ರಾಜ್ಯಭಾರವನ್ನು ಅವಲೋಕಿಸುವ ಅವಕಾಶ ಸಿಕ್ಕಿತು. ತನ್ನ ಅನುಭವಗಳನ್ನೆಲ್ಲ ತನ್ನ ದಿನಚರಿಯಲ್ಲಿ ಈತ ಬರೆದಿಟ್ಟಿದ್ದಾನೆ. ಸೂಕ್ಷ್ಮಗ್ರಾಹಿಯಾಗಿದ್ದ ಈತ ಅಂತರ್ದೃಷ್ಟಿಯಿಂದ ಪರಿಭಾವಿಸಿದ ಜೀವನಾನುಭವಗಳೆಲ್ಲ ಎಂಟು ಸಂಪುಟಗಳಷ್ಟಿರುವ ದಿನಚರಿಯಲ್ಲಿ ಅಡಕವಾಗಿವೆ. ಈ ಮೂವರ ಆಳ್ವಿಕೆಯ ಕಾಲದ ರಾಜಕೀಯ ಜೀವನದ ಸಮಗ್ರ ಚಿತ್ರಣವೂ ಅಲ್ಲಿದೆ. 1875ರಲ್ಲಿ ಪ್ರಕಟವಾದ ಮುರು ಸಂಪುಟಗಳ ಪ್ರಥಮ ಭಾಗದಲ್ಲಿ ಜಾರ್ಜ್ ಮತ್ತು ವಿಲಿಯಂ ದೊರೆಗಳ ಕಾಲವನ್ನೂ ಅನಂತರ ಬಂದ ಐದು ಸಂಪುಟಗಳ ದ್ವಿತೀಯ ಭಾಗದಲ್ಲಿ ವಿಕ್ಟೋರಿಯರಾಣಿಯ ಕಾಲದ ಚರಿತ್ರೆಯನ್ನು ನೋಡಬಹುದು. ಗ್ರೇವಿಲ್ ಮೆಮೊರೀಸ್ : ಜರ್ಸಲ್ ಆಫ್ ದಿ ರೇನ್ ಆಫ್ ಜಾರ್ಜ್ IV, ವಿಲಿಯಂ IV ಅಂಡ್ ಕ್ವೀನ್ ವಿಕ್ಟೋರಿಯ ಎಂಬುದು ಎಂಟು ಸಂಪುಟಗಳ ಆ ದಿನಚರಿಯ ಹೆಸರು. ಬ್ರಿಟಿಷ್ ಇತಿಹಾಸಕ್ಕೆ ಈ ಕೃತಿಯೊಂದು ಆಧಾರ ಗ್ರಂಥವೆನ್ನಲಾಗಿದೆ.

	ಸ್ಯಾಮ್ಯುಯೆಲ್ ಪೀಪ್ಸ್‍ನ ದಿನಚರಿಯನ್ನು ಬಿಟ್ಟರೆ ಗ್ರೇವಿಲ್‍ನ ದಿನಚರಿಯಷ್ಟು ಪ್ರಸಿದ್ಧವಾದ ಮತ್ತು ಶ್ರೇಷ್ಠವಾದ ಕೃತಿ ಇಂಗ್ಲಿಷ್ ದಿನಚರಿ ಸಾಹಿತ್ಯದಲ್ಲಿ ಮತ್ತೊಂದು ಇಲ್ಲವೆಂದು ವಿಮರ್ಶಕರ ಅಭಿಪ್ರಾಯ.					(ಕೆ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ